ವಿದ್ಯಾರ್ಥಿ ವೇತನ

 

 

ಪದವಿ ಮಟ್ಟದಲ್ಲಿ ವಿಜ್ಞಾನ ಓದುವ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ವಿದ್ಯಾರ್ಥಿವೇತನ

1.  ಸರ್.ಸಿ.ವಿ.ರಾಮನ್ ವಿದ್ಯಾರ್ಥಿ ವೇತನ:

     ಪದವಿ ಮಟ್ಟದಲ್ಲಿ ವಿಜ್ಞಾನ ಓದುವ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.70 ರಷ್ಟು ಅಂಕಗಳನ್ನು ಪಡೆದು ಪ್ರಥಮ ಬಿ.ಎಸ್ಸಿ ತರಗತಿಗೆ ಸೇರಿರುವ    ಹಾಗೂ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತಶಾಸ್ತ್ರ, ಭೂಗರ್ಭಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳಲ್ಲಿ ಕನಿಷ್ಠ 02 ವಿಷಯಗಳನ್ನಾದರೂ ತೆಗೆದುಕೊಂಡು ಸರ್ಕಾರಿ ಹಾಗೂ ಖಾಸಗಿ  ಅನುದಾನಿತ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಾರ್ಷಿಕ ತಲಾ ರೂ.5000/-ಗಳಂತೆ, 3000 ವಿದ್ಯಾರ್ಥಿಗಳಿಗೆವಿದ್ಯಾರ್ಥಿವೇತನ ನೀಡಲಾಗುವುದು.

2. ಸಂಚಿ ಹೊನ್ನಮ್ಮ ವಿದ್ಯಾರ್ಥಿ ವೇತನ:
ಹೆಣ್ಣುಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ವ್ಯಾಸಂಗ ಮಾಡುವ ಪ್ರತಿಭಾವಂತ  ವಿದ್ಯಾರ್ಥಿನಿಯರಿಗೆ ತಲಾ ರೂ 2000/- ಗಳಂತೆ, 11250 ವಿದ್ಯಾರ್ಥಿನಿಯರಿಗೆ ನೂತನ/ನವೀಕರಣ ವಿದ್ಯಾರ್ಥಿವೇತನ ನೀಡಲಾಗುವುದು.

3. ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕಾರ:
ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು, ಸಿ.ಇ.ಟಿ ಮೂಲಕ ವೃತ್ತಿಶಿಕ್ಷಣ ಕೋರ್ಸ್‍ಗಳಿಗೆ ಪ್ರವೇಶ ಪಡೆಯುವ ಬಡತನ ರೇಖೆಗಿಂತ ಕೆಳಗಿರುವ ಬಿ.ಪಿ.ಎಲ್ ಕಾರ್ಡು ಹೊಂದಿರುವ ಕುಟುಂಬದ ವಿದ್ಯಾರ್ಥಿನಿಯರಿಗೆ ಅವರುಗಳು ಸಿ.ಇ.ಟಿ ಘಟಕದಲ್ಲಿ ಪಾವತಿಸಿರುವ ಸರ್ಕಾರಿ ಶುಲ್ಕಗಳನ್ನು ಮರುಪಾವತಿಸಲಾಗುವುದು. ಇದಕ್ಕಾಗಿ ಪ್ರತಿ ಜಿಲ್ಲೆಯಿಂದ 10 ಹೆಣ್ಣು ಮಕ್ಕಳನ್ನು ಜಿಲ್ಲಾಧಿಕಾರಿಗಳ ನೇತೃತ್ವದ  ಸಮಿತಿಯಿಂದ ಆಯ್ಕೆ ಮಾಡಲಾಗುವುದು.  ಸದರಿ ವಿದ್ಯಾರ್ಥಿನಿಯರಿಗೆ ಅವರುಗಳ ಕೋರ್ಸ್ ಮುಗಿಯುವವರೆಗೂ ನವೀಕರಿಸಲಾಗುವುದು. (ಅಂದಾಜು ಸುಮಾರು 750 ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿದೆ).

4. ರಾಜೀವ್ ಗಾಂಧಿ ಸಾಲರೂಪದ ವಿದ್ಯಾರ್ಥಿವೇತನ:
ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ವರ್ಗದ ಪದವಿ ವಿದ್ಯಾರ್ಥಿಗಳಿಗೆ ರಾಜೀವ್ ಗಾಂಧಿ ಸಾಲರೂಪದ ವಿದ್ಯಾರ್ಥಿವೇತನ  ಯೋಜನೆಯಡಿ   ಕುಟುಂಬದ ವಾರ್ಷಿಕ ವರಮಾನ 2.5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವಂತಹ ವಿದ್ಯಾರ್ಥಿಗಳು ರಾಷ್ಟ್ರೀಕೃತ ಬ್ಯಾಂಕ್‍ನಿಂದ ಪಡೆದಿರುವ ಶಿಕ್ಷಣ ಸಾಲಕ್ಕೆ ನೋಡಲ್ ಬ್ಯಾಂಕ್ ಆದ  ವಿಜಯಾ ಬ್ಯಾಂಕ್ಕ್‍ನವರು ಕ್ಲೇಮ್ ಮಾಡುವ ಬಡ್ಡಿಯ ಮೊತ್ತಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು.

5. ಹೆಚ್.ಐ.ವಿ/ಕುಷ್ಠರೋಗ ಪೀಡಿತರಿಗೆ/ಪೀಡಿತರ ಮಕ್ಕಳಿಗೆ ವಿದ್ಯಾರ್ಥಿವೇತನ:
ಸರ್ಕಾರಿ/ಖಾಸಗಿ ಅನುದಾನಿತ/ಅನುದಾನ ರಹಿತ ಪದವಿ/ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೆಚ್.ಐ.ವಿ/ಏಡ್ಸ್/ ಕುಷ್ಠರೋಗ ಪೀಡಿತ (ಬದುಕಿರುವ/ಮೃತ ಹೊಂದಿರುವ) ಪಾಲಕರಿಗೆ  ಜನಿಸಿದ ಮಕ್ಕಳಿಗೆ ಅಥವಾ ಹೆಚ್.ಐ.ವಿ/ಏಡ್ಸ್/ಕುಷ್ಠರೋಗ ಪೀಡಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಶಿಷ್ಯವೇತನ ನೀಡಲಾಗುವುದು. ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ರೂ.23000/- ಗಳಂತೆ ನೂತನ/ನವೀಕರಣ ವಿದ್ಯಾರ್ಥಿವೇತನ ನೀಡಲಾಗುವುದು.

6. ಭಾರತ ಸರ್ಕಾರದ ರಾಷ್ಟ್ರೀಯ ವಿದ್ಯಾರ್ಥಿವೇತನ, ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹ:
ಸೈನಿಕ ಸಿಬ್ಬಂದಿ ಮಕ್ಕಳು ಹಾಗೂ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಾವತಿಗಾಗಿ

7. ಇತರೆ ಸರ್ಕಾರಿ ಕಾಲೇಜುಗಳು

ಎ. ಭಾಷಾ ವಿದ್ಯಾರ್ಥಿವೇತನ:
ಪಿ.ಯು.ಸಿಯಲ್ಲಿ ಕನ್ನಡ, ಆಂಗ್ಲ ಮತ್ತು ಸಂಸ್ಕೃತ ಐಚ್ಛಿಕ ಭಾಷಾ ವಿಷಯವನ್ನು ವ್ಯಾಸಂಗ ಮಾಡಿ ಪ್ರಥಮ ಬಾರಿಗೆ ಉತ್ತೀರ್ಣರಾಗಿ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ   ಕನ್ನಡ/ಆಂಗ್ಲ/ಸಂಸ್ಕೃತ ಐಚ್ಛಿಕ ಭಾಷಾ ವಿಷಯಕ್ಕೆ ಪ್ರವೇಶ ಪಡೆದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಭಾಷಾ ವಿಷಯದ ಪ್ರೋತ್ಸಾಹಕ್ಕಾಗಿ ಮಾಸಿಕ ರೂ.50/- ರಂತೆ ಗರಿಷ್ಠ 10 ತಿಂಗಳಿಗೆ  ರೂ.500/- ರಂತೆ ಐಚ್ಛಿಕ ಕನ್ನಡಕ್ಕೆ 10, ಐಚ್ಛಿಕ ಇಂಗ್ಲೀಷ್‍ಗೆ 10 ಹಾಗೂ ಐಚ್ಛಿಕ ಸಂಸ್ಕೃತ 09 ರಂತೆ ಒಟ್ಟು 29 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು.

ಬಿ. ಜೆ.ಎನ್.ಯು ವಿದ್ಯಾರ್ಥಿವೇತನ:
ಜವಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ ಇಲ್ಲಿ ಎಂ.ಫಿಲ್/ಪಿ.ಹೆಚ್‍ಡಿ ಪದವಿಗೆ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ಕರ್ನಾಟಕ ರಾಜ್ಯದ 02 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ   ನೀಡಲಾಗುವುದು.

8. ಆಂಗ್ಲೋ ಇಂಡಿಯನ್ ವಿದ್ಯಾರ್ಥಿ ವೇತನ:
ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಆಂಗ್ಲೋ ಇಂಡಿಯನ್ ವಿದ್ಯಾರ್ಥಿಗಳಿಗೆ ಅವರುಗಳು ಪ್ರವೇಶಾತಿ ಸಮಯದಲ್ಲಿ ಪಾವತಿಸುವ ಬೋಧನಾ  ಶುಲ್ಕವನ್ನು ಮರು ಪಾವತಿ ಮಾಡಲಾಗುವುದು.